ಹಕ್ಸ್‍ಲಿ, ಆಲ್ಡಸ್ ಲೆನರ್ಡ್ 
1894-1963. ಇಂಗ್ಲಿಷ್ ಕಾದಂಬರಿಕಾರ ಮತ್ತು ಗದ್ಯಬರೆಹಗಾರ. ಪ್ರಸಿದ್ಧ ಪ್ರಾಣಿಶಾಸ್ತ್ರಜ್ಞ ಥಾಮಸ್ ಹೆನ್ರಿ ಹಕ್ಸ್‍ಲಿಯ ಮೊಮ್ಮಗ. ಮತ್ತೊಬ್ಬ ಪ್ರಸಿದ್ಧ ಜೀವವಿಜ್ಞಾನಿ ಜೂಲಿಯಸ್ ಹಕ್ಸ್‍ಲಿ ಇವನ ಸಹೋದರ. ಸರೀ ದೇಶದ ಗಾಡ್‍ಅಲ್‍ಮಿಂಗ್ ಎಂಬಲ್ಲಿ 1894ರಲ್ಲಿ ಜನಿಸಿದ. ಇವನು 14 ವರ್ಷದವನಿದ್ದಾಗ ತಾಯಿ ಕಾಲವಾದಳು. 16ನೆಯ ವರ್ಷದಲ್ಲಿ ದೃಷ್ಟಿ ಮಂದವಾಯಿತು. ವಿಜ್ಞಾನ ಸಂಶೋಧನೆ ನಡೆಸಲು ಅಸಮರ್ಥನಾದ. ಅನಂತರ ಆಕ್ಸ್‍ಫರ್ಡ್‍ನ ಬ್ಯಾಲಿಯೋಲ್ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಅಧ್ಯಯನಕ್ಕೆ ತೊಡಗಿದ. ಮಿಡ್ಲ್‍ಟನ್ ಮರಿ ಸಂಪಾದಿಸುತ್ತಿದ್ದ ದ ಅಥೆನುಯಮ್ ನಿಯತ ಕಾಲಿಕೆಗೆ ಲೇಖನಗಳನ್ನು ಬರೆಯುತ್ತಿದ್ದ. ಆ ವೇಳೆಗೆ (1919) ಇವನ ಮೂರು ಕಾವ್ಯ ಸಂಪುಟಗಳು ಹಾಗೂ ಕಥಾಸಂಕಲನ ಪ್ರಕಟಗೊಂಡವು. 

	ಎರಡು ಮಹಾಯುದ್ಧಗಳ ಮಧ್ಯದ ಭ್ರಾಂತಿಗಳನ್ನು ಕಳೆದುಕೊಂಡು ವಿಷಾದ, ದಿಗ್ಭ್ರಮೆ, ಮಾನಸಿಕ ಹೊಯ್ದಾಟಗಳಿಗೆ ಸಿಲುಕಿದ ಪೀಳಿಗೆಗೆ ಸೇರಿದ ಇವನು ಈ ಕಾಲಮಾನದ ಹಲವು ಮುಖಗಳನ್ನು ಮತ್ತು ಸಮಸ್ಯೆಗಳನ್ನು ತನ್ನ ಕಾದಂಬರಿಗಳಲ್ಲಿ ಹಾಗೂ ಗದ್ಯಬರೆಹಗಳಲ್ಲಿ ವಿವೇಚಿಸಿದ್ದಾನೆ. ಆ್ಯನ್‍ಟಿಕ್ ಹೇ, ಆನ್ ದಿ ಮಾರ್ಜಿನ್ (1923), ಅಲಾಂಗ್ ದಿ ರೋಡ್ (1925), ಪ್ರಾಪರ್ ಸ್ಟಡೀಸ್ (1927), ಪಾಯಿಂಟ್ ಕೌಂಟರ್ ಪಾಯಿಂಟ್ (1928), ಟೆಕ್ಟ್ಸ್ ಅ್ಯಂಡ್ ಪ್ರಿಟೆಕ್ಟ್ಸ್ (1932), ಎಂಡ್ಸ್ ಅಂಡ್ ಮೀನ್ಸ್ (1937) ಮೊದಲಾದವು ಇವನ ಕೆಲವು ಕೃತಿಗಳು. ರಚನಾತ್ಮಕ ಶಾಂತಿ ಮನೋಧರ್ಮ, ಸಹಕಾರಿ ಸಮಾಜವಾದ ಮೊದಲಾದ ಧ್ಯೇಯಗಳನ್ನು ಈ ಕೃತಿಗಳು ಪ್ರತಿಪಾದಿಸಿವೆ. ಇವನ ಕೃತಿಗಳಲ್ಲಿ ಕಂಡುಬರುವ ನಿಷ್ಠುರ ಪರೀಕ್ಷಾ ಮನೋಧರ್ಮ, ಹರಿತವಾದ ಬುದ್ಧಿಚಾತುರ್ಯ ಓದುಗರನ್ನು ಆಕರ್ಷಿಸುತ್ತವೆ. ದ ಬ್ರೇವ್ ನ್ಯೂ ವಲ್ರ್ಡ್ (1932) ಇವನ ಅತ್ಯಂತ ಜನಪ್ರಿಯ ವಿಡಂಬನಾತ್ಮಕ ಕಾದಂಬರಿ. ಐಲೆಸ್ ಇನ್ ಗಾಜಾ (1936) ಕೃತಿಯನ್ನು ಬರೆದ ಅನಂತರ 1937ರಲ್ಲಿ ಕ್ಯಾಲಿ¥sóÉೂೀರ್ನಿಯ ಕಡೆ ಪ್ರಯಾಣ ಬೆಳೆಸಿದ. ಇಲ್ಲಿಂದ ಇವನ ಸಾಹಿತ್ಯಕ ಪ್ರಸಿದ್ಧಿಗೆ ಕುಂದುಂಟಾಯಿತು. 

	ಅನಂತರದ ದಿನಗಳಲ್ಲಿ ಇವನ ಆಸಕ್ತಿ ಅನುಭಾವದಲ್ಲಿ ಬೆಳೆಯಿತು. ಪರಮಸತ್ಯದ ಅರಿವು ಮತ್ತು ಅದರೊಂದಿಗೆ ಸಾಮರಸ್ಯದ ಸಾಧನೆ ಇವು ಬಾಳಿಗೆ ಅಗತ್ಯ ಎಂಬ ದೃಷ್ಟಿ ಬೆಳೆಯಿತು. ಭಗವದ್ಗೀತೆ ಇವನಿಗೆ  ಅಚ್ಚುಮೆಚ್ಚಿನ ಗ್ರಂಥವಾಗಿತ್ತು. ಇದನ್ನು ಈತ ಶ್ರದ್ಧೆಯಿಂದ ಅಧ್ಯಯನ ಮಾಡಿದ. ದಿ ಪೆರಿನಿಯಲ್ ಫಿಲಾಸಫಿ (1946), ಥೀಮ್ಸ್ ಅಂಡ್ ವೇರಿಯೇಷನ್ಸ್ (1950), ಅಡೋನಿಸ್ ದಿ ಆಲ್ಫ್‍ಬೆಟ್ (1956)-ಈ ಕೃತಿಗಳಲ್ಲಿ ಇವನ ಅನುಭಾವದ ಬಗೆಗಿನ ಆಸಕ್ತಿ ಗೋಚರಿಸುತ್ತದೆ. ದಿ ಡೋರ್ಸ್ ಆಫ್ ಪರ್‍ಸೆಪ್‍ಷನ್ಸ್ (1954), ಹೆವನ್ ಅಂಡ್ ಹೆಲ್ (1956) ಕೃತಿಗಳಲ್ಲಿ ಪರಮಸತ್ಯವನ್ನು ಕಂಡುಕೊಳ್ಳುವ ಮಾರ್ಗಗಳ ಪ್ರಯೋಗಗಳನ್ನು ಸೂಚಿಸಿದ್ದಾನೆ. ಈತ 1963ರಲ್ಲಿ ನಿಧನನಾದ.						
	(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ